ಪ್ರೈಯರ್, ಮ್ಯಾಥ್ಯೂ
	1664-1721. ಇಂಗ್ಲಿಷ್ ಕವಿ ಮತ್ತು ರಾಯಭಾರ ಚತುರ. ಮ್ಯಾಟ್ ಎಂಬ ಹೆಸರಿನಿಂದಲೂ ಪ್ರಖ್ಯಾತನಾದವ. ಹುಟ್ಟಿದ್ದು ಡಾರ್ಸೆಟ್ಟಿನ ವಿಂಬಾರ್ನ್‍ನ ಮಧ್ಯಮವರ್ಗದ ಕುಟುಂಬವೊಂದರಲ್ಲಿ. ಶಿಕ್ಷಣ ವೆಸ್ಟ್‍ಮಿಸಿಸ್ಟೆರ್ ಶಾಲೆ ಹಾಗೂ ಕೇಂಬ್ರಿಜ್‍ನಲ್ಲಿ. ಚಾಲ್ರ್ಸ್ ಮಾಂಟೆಗೂನ (ಅರ್ಲ್ ಆಫ್ ರ್ಯಾಲಿಫ್ಯಾಕ್ಸ್) ಸ್ನೇಹಿತ. ವಿದ್ಯಾರ್ಥಿ ದೆಸೆಯಿಂದಲೇ ಕವಿತೆಗಳನ್ನು ಬರೆಯುವ ಹವ್ಯಾಸ. ಡ್ರೈಡನ್ ಕವಿಯ ದಿ ಹೈಂಡ್ ಅಂಡ್ ದಿ ಪ್ಯಾಂಥರ್ ಎಂಬ ಕವನವನ್ನು ಅಣಕಮಾಡಿ ದಿ ಸಿಟಿಮೌಸ್ ಅಂಡ್ ದಿ ಕಂಟ್ರಿಮೌಸ್ ಎಂಬ ಕವಿತೆಯನ್ನು ಬರೆದು ಪ್ರಸಿದ್ಧನಾದ. ಮೊದಲು ಕಾಲೇಜಿನ ಫೆಲೋ ಆಗಿ ಸ್ವಲ್ಪ ಕಾಲ ಕೆಲಸಮಾಡಿ ಅನಂತರ ಇಂಗ್ಲಿಷ್ ರಾಯಭಾರ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡು ಪ್ಯಾರಿಸ್‍ಗೆ ಹೋದ. ಹೇಗ್‍ನಲ್ಲಿ ಮತ್ತು 1697ರ ರಿಜ್ವಿಕ್ ಸಂಧಾನದ ಕಾಲದಲ್ಲಿ ಇಂಗ್ಲಿಷ್ ರಾಯಬಾರಿಯ ಕಾರ್ಯದರ್ಶಿಯಾಗಿದ್ದ. ಈ ಅವಧಿಯಲ್ಲಿ ಹಲವಾರು ಕವಿತೆಗಳನ್ನು ಬರೆದ. ಈತ ಹೆಚ್ಚಾಗಿ ಸಾರ್ವಜನಿಕ ಬಿನ್ನವತ್ತಳೆಗಳಿಗೆ ಹೊಂದುವ ಪ್ರಶಂಸಾತ್ಮಕ (ಪ್ರಶಸ್ತಿ) ಪದ್ಯಗಳನ್ನು ಪ್ರಣಯಗೀತೆಗಳನ್ನು ಬರೆದರೂ ಕೆಲವು ಗಂಭೀರ ಚಿಂತನಶೀಲ ಕವನಗಳನ್ನೂ ರಚಿಸಿದ. ಈತನ ಕವನಗಳಲ್ಲಿ ಕಾಣುವ ರಚನಾ ಚಾತುರ್ಯ, ಉಲ್ಲಾಸ, ಲಾವಣ್ಯ ಅಸದೃಶವಾದವು. 20ನೆಯ ಶತಮಾನದವರೆಗೂ ಅಪ್ರಕಟಿತವಾಗಿ ಹಸ್ತಪ್ರತಿಯಲ್ಲೇ ಇದ್ದ ಜಿನ್ನಿ ದಿ ಜಸ್ಟ್ ಎಂಬ ಕವಿತೆ ಈತನ ಮಹೋನ್ನತ ಕೃತಿ. ಕವನಗಳಲ್ಲದೆ ಕಟ್ಟುಕಥೆಗಳನ್ನೂ ಸೊಗಸಾದ ಚಾಟೋಕ್ತಿಗಳನ್ನೂ ಬರೆದಿದ್ದಾನೆ.

	1701ರಲ್ಲಿ ಈಸ್ ಗ್ರೀನ್‍ಸ್ಟೆಡ್ ಕ್ಷೇತ್ರದಿಂದ ಚುನಾಯಿತನಾಗಿ ಪಾರ್ಲಿಮೆಂಟ್ ಸದಸ್ಯನಾದ. ಅನಂತರ ವಾಣಿಜ್ಯ ಹಾಗೂ ಕೃಷಿ ಕಮಿಷನರ್ ಆಗಿ ನೇಮಕಗೊಂಡ. ಆನಿ ರಾಣಿಯ ಕಾಲದಲ್ಲಿ 1702ರಲ್ಲಿ ಟೋರಿ ಪಕ್ಷವನ್ನು ಸೇರಿದ. 1710ರಲ್ಲಿ ಟೋರಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈತನ ಮುತ್ಸದ್ಧಿತನದಿಂದಾಗಿ ಪ್ಯಾರಿಸ್‍ಗೆ ರಾಯಭಾರಿಯಾಗಿ ಹೋದ. ಈತ ಶಾಂತಿದೂತ. 1713ರಲ್ಲಿ ಯೂಟ್ರೆಕ್ಟ್ ಒಪ್ಪಂದ ಈತನ ವರ್ಚಸ್ಸಿನಿಂದಲೇ ಆಗಿ `ಮ್ಯಾಟ್‍ನ ಶಾಂತಿ ಎಂದು ಮನೆ ಮಾತಾಯಿತು. ಆನಿ ರಾಣಿಯ ಮರಣಾನಂತರ ಈತನ ದುರ್ದೆಸೆ ಆರಂಭವಾಯಿತು. ಸರ್ ರಾಬರ್ಟ್ ವಾಲ್ಪೋಲ್ ಈತನ ಮೇಲೆ ಅನೇಕ ಆರೋಪಗಳನ್ನು ಹೊರಿಸಿ ಸೆರೆಮನೆಗೆ ಕಳಿಸಿದ (1715_17). ಕಾರಾಗೃಹವಾಸದ ಅವಧಿಯಲ್ಲಿ ಅಲ್ಮಾ ಆರ್ ದಿ ಪ್ರೋಗ್ರೆಸ್ ಅಫ್ ದಿ ಮೈಂಡ್ ಎಂಬ ನೀಳ್ಗವನ ರಚಿಸಿದ. ಟು ಎ ಚೈಲ್ಡ್ ಆಫ್ ಕ್ವಾಲಿಟಿ. ದಿ ಫಿಮೇಲ್ ಫೀಟನ್ ಈತನ ಪ್ರಖ್ಯಾತ ಕವನಗಳು.

	ಯಾವಾಗಲೂ ಆರೋಗ್ಯಕೊಂಚ ಕಡಿಮೆಯೇ ಎನ್ನುವಂತಹ ದೇಹ ಪ್ರಕೃತಿಯ ಈ ಕವಿ ರಾಜಕಾರಣದ ಬವಣೆಗಳಿಗೆ ಸಿಕ್ಕಿ ಬಳಲಿ 1721ರಲ್ಲಿ ಕೊನೆಯುಸಿರೆಳೆದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ